Monday, May 2, 2011

ಪತ್ರಿಕೋದ್ಯಮ, ಹಳಗನ್ನಡ ಡಿಪ್ಲೊಮಾ ಶೀಘ್ರ ಆರಂಭ


ಚನ್ನರಾಯಪಟ್ಟಣ: ‘ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ     ರಂಗಭೂಮಿ, ಪತ್ರಿಕೋದ್ಯಮ ಹಾಗೂ ಹಳಗನ್ನಡ  ವಿಷಯಗಳ ಬಗ್ಗೆ ಡಿಪ್ಲೊಮಾ ಕೋರ್ಸ್ ಆರಂಭಿಸಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ತಿಳಿಸಿದರು.

ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮೂರು ವಿಷಯಗಳಲ್ಲಿ ದೂರ ಶಿಕ್ಷಣ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆಯಲಾಗಿದೆ. ಜೂನ್‌ನಿಂದ  ಕೋರ್ಸ್ ಪ್ರಾರಂಭಿಸಲಾಗುವುದು. ಪಠ್ಯಕ್ರಮ ರೂಪಿಸಲು ಸಮಿತಿ ನೇಮಿಸಲಾಗಿದ್ದು, ಅಂತಿಮ ಹಂತದಲ್ಲಿದೆ’ ಎಂದರು.

‘ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಗಿನಿಂದ ಈವರೆಗಿನ ಕಾರ್ಯ ವೈಖರಿಯ ವಿವರಗಳನ್ನು ನೀಡುವಂಥ ಸಾಕ್ಷ್ಯಚಿತ್ರವೊಂದನ್ನು  ತಯಾರಿಸಲು ಉದ್ದೇಶಿಸಲಾಗಿದೆ. ಕರ್ನಾಟಕ ಏಕೀಕರಣ, ಗೋಕಾಕ್ ಚಳವಳಿಯಲ್ಲಿ ಕ.ಸಾ.ಪ. ಪಾತ್ರ, ಇದುವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ಬಗ್ಗೆ ಮಾಹಿತಿ, ಕ.ಸಾ.ಪ. ಚುನಾವಣೆ, ರಾಜ್ಯ, ಜಿಲ್ಲಾ, ತಾಲ್ಲೂಕು ಸಮ್ಮೇಳನವನ್ನು ಆರಂಭಿಸಿದ ವರ್ಷ, ಇತ್ಯಾದಿ ಘಟನೆಯನ್ನು ಅದರಲ್ಲಿ ದಾಖಲಿಸಲಾಗುವುದು. ಸುಮಾರು 20 ಗಂಟೆ ಅವಧಿಯ ಸಾಕ್ಷ್ಯಚಿತ್ರ ತಯಾರಿಸಿ ಕ.ಸಾ.ಪ.ದಲ್ಲಿ ಸಂಗ್ರಹಿಸಿಡಲಾಗುವುದು. ಅದನ್ನು ಸಂಕ್ಷಿಪ್ತವಾಗಿ ತಿಳಿಸುವ ಹಿನ್ನಲೆಯಲ್ಲಿ ಮುಖ್ಯಾಂಶಗಳನ್ನೊಳಗೊಂಡ ತಲಾ 1 ಗಂಟೆ 20 ನಿಮಿಷದ 2 ಸಿ.ಡಿ.ಯನ್ನು ತಯಾರಿಸಲಾಗುವುದು. 3 ತಿಂಗಳೊಳಗೆ ಸಾಕ್ಷ್ಯಚಿತ್ರ ಸಿದ್ಧವಾಗಲಿದೆ’ ಎಂದು ತಿಳಿಸಿದರು.

‘ಪರಿಷತ್ತಿನಿಂದ ಶೀಘ್ರದಲ್ಲೇ ದಕ್ಷಿಣ ದ್ರಾವಿಡ ಜ್ಞಾತಿ ಪದಕೋಶವನ್ನು ಹೊರತರಲಾಗುವುದು. ಇದರಲ್ಲಿ ಕನ್ನಡ, ತಮಿಳು, ತೆಲುಗು, ತುಳು, ಮಲೆಯಾಳಂ ಭಾಷೆಯ ಪದಪುಂಜಗಳನ್ನು ಸೇರಿಸಲಾಗುವುದು. ಈ ಭಾಷೆಯಲ್ಲಿ ಬಳಕೆಯಲ್ಲಿರುವ ಪದಗಳ ಅನುವಾದ  ಕಾರ್ಯ  ನಡೆಯಲಿದೆ. ದ್ರಾವಿಡ ಭಾಷೆಯ ಪರಸ್ಪರ ಸಂಬಂಧಗಳನ್ನು ತಿಳಿಸಿಕೊಡುವುದು ಇದರ ಉದ್ದೇಶ’ ಎಂದರು.